ಟೊರೀನಿಯ -
ಸ್ಕ್ರಾಫುಲೆಯೇಸೀ ಕುಟುಂಬಕ್ಕೆ ಸೇರಿದ ವಾರ್ಷಿಕ ಇಲ್ಲವೆ ಬಹುವಾರ್ಷಿಕ ಅಲಂಕಾರ ಸಸ್ಯ. ಭಾರತ, ಮಲಯ ಮತ್ತು ಏಷ್ಯದ ಉಷ್ಣಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಇದರಲ್ಲಿ ಸುಮಾರು 33 ಪ್ರಭೇದಗಳುಂಟು. ಇವುಗಳಲ್ಲಿ ಅನೇಕವನ್ನು ಅಂದಕ್ಕಾಗಿ ಹೂಮಡಿಗಳ ಅಂಚಿನಲ್ಲಿ, ತೂಗುಬುಟ್ಟಿಗಳಲ್ಲಿ, ಕುಂಡಗಳಲ್ಲಿ, ಕಿಟಕಿಗಳಲ್ಲಿ ಬೆಳೆಸಲಾಗುತ್ತದೆ.

ಎಲ್ಲ ಪ್ರಭೇದಗಳೂ ಕುಳ್ಳಾಗಿ ಬೆಳೆಯುವ ಮೂಲಿಕೆಗಳು; ನೆಲದ ಮೇಲೆ ಹರಡಿಕೊಂಡು ಬೆಳೆಯುವುವು. ಎಲೆಗಳ ಸರಳ; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಗಳ ಅಂಚು ದಂತಿತ. ಹೊಗೊಂಚಲು ರೆಸೀóಮ್ ಮಾದರಿಯದು, ರೆಂಬೆಗಳ ತುದಿಯಲ್ಲಿ ಸ್ಥಿತವಾಗಿರುತ್ತದೆ. ಹೂಗಳು ಬಲು ಸುಂದರವಾಗಿವೆ; ಇವುಗಳ ಬಣ್ಣ ಉಜ್ವಲವಾದ ಊದಾಮಿಶ್ರಿತ ನೀಲಿ, ತಿಳಿ ಊದಾ, ತಿಳಿನೀಲಿ ಹಳದಿಮಿಶ್ರಿತ ಬಿಳಿ ಇಲ್ಲವೆ ಅಚ್ಚಬಿಳಿ-ಹೀಗೆ ವೈವಿಧ್ಯಮಯ. ಜೊತೆಗೆ ದಳಸಮೂಹದ ಕಂಠದಲ್ಲಿ ಹೂಂಬಣ್ಣದ ಇಲ್ಲವೆ ಹೂವಿನ ಬಣ್ಣಕ್ಕೆ ವಿರುದ್ಧವಾದ ಬೇರೆ ಬಣ್ಣದ ಗುರುತು ಇರುವುದರಿಂದ ಹೂಗಳು ಬಹಳ ಸುಂದರವಾಗಿ ಕಾಣುವುವು. ದಳಸಮೂಹ ಇರ್ತುಟಿ ರೀತಿಯದು. ಕೇಸರಗಳು 4 ಫಲ ಸಂಪುಟ ಮಾದರಿಯದು.

ಟೊರೀನಿಯವನ್ನು ವರ್ಷದ ಎಲ್ಲ ಕಾಲಗಳಲ್ಲೂ ಬೆಳೆಸಬಹುದು. ಬಿತ್ತನೆ ಬೀಜಗಳ ಮೂಲಕ, ನೇರವಾಗಿ ಮಡಿಗಳಲ್ಲಿ ಇಲ್ಲವೆ 20 ಛಿm. ವ್ಯಾಸದ ಕುಂಡಗಳಲ್ಲಿ ಬಿತ್ತಿ ಅನಂತರ ಸಸಿಗಳನ್ನು ವಿರಳಮಾಡಿ ಬೆಳೆಸಬಹುದು. ಅಥವಾ ಸಸಿಗಳನ್ನು ಒಟ್ಟು ಪಾತಿಗಳಲ್ಲಿ ಮೊದಲು ಬೆಳೆಸಿಕೊಂಡು 15 ದಿವಸಗಳ ಅನಂತರ ಇವನ್ನು ಬೇರೆ ಕಡೆ ನಾಟಿಮಾಡಬಹದು. ಮಡಿಗಳಲ್ಲಿ ಬೆಳೆಸುವಾಗ ಸಸಿಯಿಂದ ಸಸಿಗೆ 20 ಅಡಿ ಅಂತರವಿರುವಂತೆ ನೋಡಿಕೊಳ್ಳಲಾಗುತ್ತದೆ. ಬಿತ್ತನೆ ಮಾಡಿದ 37 ಮತ್ತು 60ನೆಯ ದಿವಸಗಳಲ್ಲಿ ಗೊಬ್ಬರವನ್ನು ಮೇಲ್ಪದರವಾಗಿ ಹಾಕಲಾಗುತ್ತದೆ. 40, 50, 75 ಮತ್ತು 90ನೆಯ ದಿವಸಗಳಲ್ಲಿ ನಾಲ್ಕು ಸಾರಿ ಹಿಂಡಿಯ ಗೊಬ್ಬರದ ದ್ರಾವಣ ಹಾಕುವುದುಂಟು. 40, 60 ಮತ್ತು 80ನೆಯ ದಿವಸಗಳಲ್ಲಿ ಗಿಡದ ತುದಿಯನ್ನು ಮೂರು ಸಾರಿ ಚಿವುಟಿಹಾಕಿ ಗಿಡ ಪೊದೆಯಂತೆ ಹರಡಿಕೊಂಡು ಬೆಳೆಯುವಂತೆ ಮಾಡಲಾಗುತ್ತದೆ. 105ನೆಯ ದಿವಸದಲ್ಲಿ ಗಿಡ ಹೂಗಳನ್ನು ಬಿಡಲಾರಂಭಿಸುವುದು. ಹೂಗಳು ಸುಮಾರು ಎರಡು ತಿಂಗಳ ವರೆಗೂ ಗಿಡದಲ್ಲಿ ಇರುತ್ತವೆ.

ಟೊರೀನಿಯದ ಜನಪ್ರಿಯ ಪ್ರಭೇದಗಳು ಈ ರೀತಿ ಇವೆ. 1 ಟೊರೀನಿಯ ಫ್ಲೇವ: ಇದು ನೆಲದ ಮೇಲೆ ಹಬ್ಬುವ ಸ್ವಭಾವವುಳ್ಳದ್ದು. ಹೂಗಳ ಬಣ್ಣ ಹಳದಿ. ದಳಸಮೂಹದ ಕಂಠ ಕಡುಗೆಂಪು ಬಣ್ಣದ್ದಾಗಿದೆ. ಇದು ಚಳಿಗಾಲದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಬಯಲು ಪ್ರದೇಶಗಳಿಗೆ ಸೂಕ್ರವಾದ ಬಗೆಯಲ್ಲ. 

2 ಟೊರೀನಿಯ ಏಷ್ಯಾಟಿಕ: ಇದು ಬಹುವಾರ್ಷಿಕ ಬಗೆ. ನೀಲಗಿರಿ ಇದರ ತೌರು. ಇದರ ಎಲೆಗಳು ನೆಲದ ಮೇಲೆ ಹರಡಿಕೊಂಡಿದ್ದು ಹೂಗಳು ಮಾತ್ರ ಎಲೆಗಳ ಮೇಲೆ ಕಾಣುತ್ತವಾದ್ದರಿಂದ ಇದನ್ನು ಹಾಸುಮಡಿಗಳಲ್ಲಿ ಮತ್ತು ತೂಗುಬುಟ್ಟಿಗಳಲ್ಲಿ ಬೆಳೆಸಲು ಸೂಕ್ತವಾಗಿದೆ. ಹೂಗಳ ಬಣ್ಣ ನೀಲಿಮಿಶ್ರಿತ ಊದಾ. ದಳಸಮೂಹದ ಕಂಠ ಕಡು ಊದಾಬಣ್ಣದ್ದು. ಇದನ್ನು ಕಾಂಡ ತುಂಡುಗಳಿಂದಲೂ ವೃದ್ಧಿಮಾಡಬಹುದು.

3 ಟೊರೀನಿಯ ಫೋರ್‍ನಿಯರಿ: ಇದು ಎಲ್ಲ ಪ್ರಭೇದಗಳಿಗಿಂತ ಸುಂದರವಾದುದು ಮತ್ತು ಜನಪ್ರಿಯವಾದುದು. ಇದರ ಎತ್ತರ ಸುಮಾರು 30 ಛಿm. ಹೂಗಳ ಬಣ್ಣ ತಿಳಿನೀಲಿ. ದಳಸಮೂಹದ ಕಂಠ ಹೊಂಬಣ್ಣದ್ದು. ಇದರಲ್ಲಿ ಅಚ್ಚಬಿಳಿ ಬಣ್ಣದ ಹೂವುಳ್ಳ ಆಲ್ಬ ಎಂಬ ಬಗೆಯೂ ಉಂಟು.
(ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ